ಬೆಂಗಳೂರು: ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಬಹುನಿರೀಕ್ಷಿತ ಸಿನಿಮಾ ‘ರಾಬರ್ಟ್’ ಮಾರ್ಚ್ 11ರಂದು ರಿಲೀಸ್ ಆಗಲಿದೆ. ಈ ಮಧ್ಯೆ ದರ್ಶನ್ ಟಾಲಿವುಡ್ ಪ್ರವೇಶಕ್ಕೆ ವಿಘ್ನ ಉಂಟುಮಾಡುವ ಪ್ರಯತ್ನ ನಡೆದಿದೆ. ಈ ಬಗ್ಗೆ ಚಾಲೆಂಜಿಂಗ್ ಸ್ಟಾರ್ ಕಿಡಿಕಾರಿದ್ದಾರೆ.
ಕನ್ನಡ ಮಾತ್ರವಲ್ಲದೇ ತೆಲುಗು, ತಮಿಳು ಭಾಷೆಯಲ್ಲೂ ಈ ಚಿತ್ರ ಬಿಡುಗಡೆಗೆ ಸಿದ್ಧತೆ ನಡೆದಿತ್ತು. ಆದರೆ ಆಂಧ್ರಪ್ರದೇಶದಲ್ಲಿ ರಾಬರ್ಟ್ ಚಿತ್ರ ಬಿಡುಗಡೆಗೆ ಅಡ್ಡಿಯುಂಟಾಗಿದೆ. ಇನ್ನು ತೆಲುಗು ಚಿತ್ರರಂಗದ ಹೊಸನೀತಿ ವಿರುದ್ಧ ನಿರ್ಮಾಪಕರು ಚಲನಚಿತ್ರ ವಾಣಿಜ್ಯ ಮಂಡಳಿಗೆ ಲಿಖಿತ ದೂರು ಸಲ್ಲಿಕೆ ಮಾಡಿದ್ದಾರೆ. ನಿರ್ಮಾಪಕರಿಗೆ ನಟ ದರ್ಶನ್ ಸಾಥ್ ನೀಡಿದ್ದಾರೆ.
ರಾಬರ್ಟ್ ಕರ್ನಾಟಕದಲ್ಲಿ ಒಳ್ಳೆಯ ಓಪನಿಂಗ್ ಪಡೆದುಕೊಳ್ಳುತ್ತದೆ. ಆಂಧ್ರದಲ್ಲೂ ಹಾಗೇ ಆದ್ರೆ ತೆಲುಗು ಚಿತ್ರಗಳಿಗೆ ಸಮಸ್ಯೆ ಆಗುತ್ತೆ. ಹಾಗಾಗಿ ರಾಬರ್ಟ್ ದಿನಾಂಕವನ್ನು ಒಂದು ವಾರ ಮುಂದೂಡಿ ಎಂಬ ಆಂಧ್ರದ ವಿತರಕರ ಸಲಹೆಗೆ ನಿರ್ಮಾಪಕ ಉಮಾಪತಿ ಗರಂ ಆದರು. ಈ ಸಂಬಂಧ ಟಾಲಿವುಡ್ ವಿರುದ್ಧ ನಟ ದರ್ಶನ್ ಫಿಲಂ ಚೇಂಬರ್ಗೆ ದೂರು ನೀಡಿದ್ದಾರೆ. ಸದ್ಯ ಫಿಲಂ ಚೇಂಬರ್ ಸದಸ್ಯರ ಸಭೆ ನಡೆದಿದ್ದು, ಕಚೇರಿ ಹೊರಗೆ ಟಾಲಿವುಡ್ ವಿರುದ್ಧ ಕನ್ನಡ ಪರ ಹೋರಾಟಗಾರರು ಪ್ರತಿಭಟನೆ ನಡೆಸಿದರು.
ಈ ನಡುವೆ ರಾಬರ್ಟ್ ರಿಲೀಸ್ ಗೆ ಕ್ಯಾತೆ ತೆಗೆದ ಟಾಲಿವುಡ್ ವಿರುದ್ಧ ನಟ ದರ್ಶನ್ ಗರಂ ಆಗಿದ್ದು, ಕನ್ನಡ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ಶುಕ್ರವಾರ ಸಭೆ ನಡೆದು ತೆಲುಗು ಚಿತ್ರರಂಗದ ಹೊಸನೀತಿ ವಿರುದ್ಧ ದೂರು ನೀಡಲಾಗಿದೆ. ಈ ಕುರಿತು ಸಮಸ್ಯೆ ಬಗೆಹರಿಸುವುದಾಗಿ ಫಿಲ್ಮಂ ಛೇಂಬರ್ ಅಧ್ಯಕ್ಷ ಜೈರಾಜ್ ತಿಳಿಸಿದ್ದಾರೆ.
