ಚೆನ್ನೈ: ಮೊದಲ ಟೆಸ್ಟ್ ಪಂದ್ಯದಲ್ಲಿ ಸೋತು ಮುಖಭಂಗ ಅನುಭವಿಸಿರುವ ಟೀಂ ಇಂಡಿಯಾ ಇದೀಗ 2ನೇ ಟೆಸ್ಟ್ ಪಂದ್ಯಲ್ಲಿ ಬೃಹತ್ ದತ್ತ ದಾಪುಗಾಲಿಕ್ಕುತ್ತಿದೆ.
ಚೆನ್ನೈನಲ್ಲಿ ನಡೆಯುತ್ತಿರುವ ಎರಡನೇ ಟೆಸ್ಟ್ನ ಆರಂಭಿಕ ಇನ್ನಿಂಗ್ಸ್ನಲ್ಲಿ ರೋಹಿತ್ ಶರ್ಮಾ 161 ಅವರ ಆಕರ್ಷಕ ಶತಕ ಹಾಗೂ ಅಜಿಂಕ್ಯ ರಹಾನೆ 67 ಅರ್ಧಶತಕದ ನೆರವಿನಿಂದ ಭಾರತ ಮೊದಲ ದಿನದಾಟದಂತ್ಯಕ್ಕೆ 6 ವಿಕೆಟ್ ಕಳೆದುಕೊಂಡು 300 ರನ್ ಬಾರಿಸಿದೆ.
ಭಾರತ-ಇಂಗ್ಲೆಂಡ್ ದ್ವಿತೀಯ ಟೆಸ್ಟ್ನಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಟೀಂ ಇಂಡಿಯಾ, ಆರಂಭಿಕ ಬ್ಯಾಟ್ಸ್ಮನ್ ಶುಭ್ಮನ್ ಗಿಲ್ ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ಆದರೆ ಎರಡನೇ ವಿಕೆಟ್ಗೆ ರೋಹಿತ್ ಶರ್ಮಾ ಹಾಗೂ ಚೇತೇಶ್ವರ್ ಪೂಜಾರ ಜೋಡಿ 85 ರನ್ಗಳ ಜತೆಯಾಟವಾಡುವ ಮೂಲಕ ಆಘಾತದಿಂದ ತಂಡವನ್ನು ಪಾರು ಮಾಡಿದರು.
ರೋಹಿತ್ ಶರ್ಮಾ ಹಾಗೂ ಉಪನಾಯಕ ಅಜಿಂಕ್ಯ ರಹಾನೆ ನಾಲ್ಕನೇ ವಿಕೆಟ್ಗೆ 162 ರನ್ಗಳ ಜತೆಯಾಟವಾಡುವ ಮೂಲಕ ತಂಡಕ್ಕೆ ಆಸರೆಯಾದರು.
ರೋಹಿತ್ ಶರ್ಮಾ ಟೆಸ್ಟ್ ಕ್ರಿಕೆಟ್ ವೃತ್ತಿಜೀವನದ 7ನೇ ಶತಕ ಬಾರಿಸುವ ಮೂಲಕ ಅಬ್ಬರಿಸಿದರು. ರೋಹಿತ್ ಶರ್ಮಾ 231 ಎಸೆತಗಳನ್ನು ಎದುರಿಸಿ 18 ಬೌಂಡರಿ ಹಾಗೂ 2 ಸಿಕ್ಸರ್ ನೆರವಿನಿಂದ 161 ರನ್ ಬಾರಿಸಿ ಜಾಕ್ ಲೀಚ್ಗೆ ವಿಕೆಟ್ ಒಪ್ಪಿಸಿದರೆ, ಅಜಿಂಕ್ಯ ರಹಾನೆ 67 ರನ್ ಬಾರಿಸಿ ಮೋಯಿನ್ ಅಲಿ ಬೌಲಿಂಗ್ನಲ್ಲಿ ಕ್ಲೀನ್ ಬೌಲ್ಡ್ ಆಗಿ ಪೆವಿಲಿಯನ್ ಸೇರಿದರು.
ಸದ್ಯ ರಿಷಭ್ ಪಂತ್ 33 ರನ್ ಬಾರಿಸಿ ಅಜೇಯರಾಗುಳಿದಿದ್ದರೆ, ಅಕ್ಷರ್ ಪಟೇಲ್ 5 ರನ್ ಬಾರಿಸಿ ಎರಡನೇ ದಿನಕ್ಕೆ ಕ್ರೀಸ್ ಕಾಯ್ದುಕೊಂಡಿದ್ದಾರೆ. ಈ ಇಬ್ಬರು ಬ್ಯಾಟ್ಸ್ಮನ್ಗಳ ಜತೆಯಾಟದ ಮೇಲೆ ಟೀಂ ಇಂಡಿಯಾ ಮೊದಲ ಇನಿಂಗ್ಸ್ ಸ್ಕೋರ್ ನಿರ್ಧಾರವಾಗಲಿದೆ.
ಸಂಕ್ಷಿಪ್ತ ಸ್ಕೋರ್:
ಭಾರತ ಮೊದಲ ಇನ್ನಿಂಗ್ಸ್ 6 ವಿಕೆಟ್ ಗೆ 300
(ರೋಹಿತ್ ಶರ್ಮಾ 161, ಅಜಿಂಕ್ಯ ರಹಾನೆ 67, ಚೇತೇಶ್ವರ್ ಪೂಜಾರ 21, ರಿಷಭ್ ಪಂತ್ 33*, ಲೀಚ್ 78ಕ್ಕೆ 2, ಮೋಯಿನ್ ಅಲಿ 112ಕ್ಕೆ 2)
